ಆಗ ತಾನೇ mbbs ಮುಗಿಸಿ ಒಂದು ವರ್ಷ ಕಡ್ಡಾಯ ಗ್ರಾಮೀಣ ಸೇವೆಯಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ
ಕೆಲಸಕ್ಕೆ ಸೇರಿ ಕೆಲ ತಿಂಗಳಾಗಿತ್ತು...ಸಂಬಂಧಿಕರೊಬ್ಬರ ಮನೆಯಲ್ಲಿ ಕೊಂಚ ಸಮಸ್ಯೆಯಿದ್ದರಿಂದ ಅವರ ಸಹಾಯಕ್ಕಾಗಿ ಅಮ್ಮ ತಮ್ಮ ಅಲ್ಲೇ ಇರಬೇಕಾದ ಅನಿವಾರ್ಯತೆಯಿತ್ತು..ನಾನು ಅಪ್ಪಾಜಿ ಕೆಲಸದ ನಿಮಿತ್ತ ಮನೆಯಲ್ಲಿದ್ದೆವು, ಅಮ್ಮನಿಲ್ಲದ ಮನೆ ಕೇಳಬೇಕೇ, ಕೆಲಸದಿಂದ ಮನೆಗೆ ಬಂದೊಡನೆ ಮನೆ ಬಿಕೋ ಎನ್ನುತ್ತಿತ್ತು, ಕೆಲಸದಿಂದ ಬಂದ ಅಪ್ಪಾಜಿಯೂ ಸುಸ್ತಾಗಿರುತ್ತಿದ್ದರು, ನನ್ನೊಂದಿಗೆ ಸಮಯ ಕಳೆಯಲಾಗುತ್ತಿರಲಿಲ್ಲ..ನನಗೆ ತುಂಬಾ ಬೋರಾಗಿ ಹೋಗುತ್ತಿತ್ತು..

ಅದೇ ಸಮಯಕ್ಕೆ ಒಂದು ನರ್ಸಿಂಗ್‌ ಹೋಂನಲ್ಲಿ ರಾತ್ರಿ ಪಾಣಿ ಕೆಲಸಕ್ಕೆ ವೈದ್ಯರು ಬೇಕೆಂಬುದು ನನ್ನ ಸ್ನೇಹಿತರ ಮುಖಾಂತರ ಕಿವಿಗೆ ಬಿತ್ತು.. ಸರಿ ಸುಮ್ಮನೆ ಬೋರಾಗಿ ಮನೆಯಲ್ಲಿರುವುದಕ್ಕಿಂತ ಕೆಲಸಕ್ಕಾದರೂ ಹೋಗೋಣವೇ ಎಂದು ಯೋಚಿಸಿದೆ..ಮುಂಚಿಂದಲೂ ಯಾರ ಬಳಿಯಾದರೂ ಏನಾದರೂ ಕೇಳುವುದೆಂದರೆ ಮುಜುಗರ ಭಾವ ನನಗೆ, ಆದರೂ ಮನಸ್ಸು ಮಾಡಿ ಒಂದೆರಡು ದಿನ ಯೋಚಿಸಿ ನರ್ಸಿಂಗ್ ಹೋಂನಲ್ಲಿ ಹೋಗಿ ನೀವು ವೈದ್ಯರಿಗಾಗಿ ಹುಡುಕುತ್ತಿರುವಿರಲ್ಲಾ ನಾನು ಅದರ ಬಗೆಗೆ ವಿಚಾರಿಸಲು ಬಂದೆ ಅಂದೆ..

ಆಗ ಅಲ್ಲೊಬ್ಬರು ರೂಂನಲ್ಲಿರುವ ವ್ಯಕ್ತಿಯನ್ನು ಕಾಣಿ ಅವರು ನಿಮಗೆ ಎಲ್ಲಾ ತಿಳಿಸುವರು ಅಂದರು. ಸರಿಯೆಂದು ನಾನಲ್ಲಿಗೆ ಹೋಗಿ ನನ್ನ ಪರಿಚಯ ಮಾಡಿಕೊಂಡೆ, ನನಗೀಗ ವ್ಯಕ್ತಿಯ ಬಗೆಗೆ ಆಸ್ಪತ್ರೆಯಲ್ಲಿ ಅವರ ಸ್ಥಾನದ ಬಗೆಗೂ ನೆನಪಿಲ್ಲ..ನನ್ನ ಬಗ್ಗೆ ಎಲ್ಲಾ ಕೇಳಿದ ಮೇಲೆ ವ್ಯಕ್ತಿ ಸಂಜೆ ಬನ್ನಿ ಅಲ್ಲಿನ ಗೈನಕಾಲಜಿಸ್ಟ ಮೇಡಂನೊಂದಿಗೆ ಮಾತಾಡಿ ಕೆಲಸಕ್ಕೆ ಬರುವಿರಂತೆ ಅಂದರು. ಸರಿ ಎಂದು ಹೊರಡುವ ಮುನ್ನ ಸಹಜವಾಗಿ ಸಂಬಳ ಎಷ್ಟು ಕೊಡುವಿರೆಂದೆ..10 ಸಾವಿರವೆಂದರು.. ಸಮಯಕ್ಕೆ ಬೇರೆ ಆಸ್ಪತ್ರೆಗಳಲ್ಲಿ ಕೆಲಸಕ್ಕೆ 15 ಸಾವಿರ ಸಂಬಳವಿತ್ತು, ಜೊತೆಗೆ ರಾತ್ರಿ ಪೂರಾ ಯಾವ ತಜ್ಞ ವೈದ್ಯರಿರುವುದಿಲ್ಲ ಏನೇ ಬಂದರೂ ನಾವೇ ಸಂಬಾಲಿಸಬೇಕೆಂಬ ಮಾಹಿತಿಯಿತ್ತು..ಹಾಗಾಗಿ ಬರೀ ಹತ್ತು ಸಾವಿರಾನಾ ಕನಿಷ್ಠ 15 ಸಾವಿರ ಕೊಡಬಹುದಲ್ಲವೇ?? ಬೇರೆ ಕಡೆ ಅಷ್ಟಿದೆ ಸಂಬಳವೆಂದೆ.. ಅಷ್ಟಕ್ಕೇ ವ್ಯಕ್ತಿ ಜೋರಾಗಿ ನೀವಿನ್ನು ಈಗ ತಾನೇ ಡಿಗ್ರಿ ಮುಗಿಸಿ ಬಂದಿದ್ದೀರಿ, ನಿಮಗೇನು ಅನುಭವ ಇದೆಯೆಂದು ಇಷ್ಟು ಮಾತನಾಡುತ್ತೀರಿ ಅಂತ ರೇಗಿ ಬಿಡುವುದೇ... ರೇಗುವಷ್ಟು ನಾನೇನು ಅವರನ್ನು ಪ್ರಶ್ನಿಸಿರಲಿಲ್ಲ, ಸಹಜವಾಗಿ ಕೇಳಿದ್ದಷ್ಟೇ....ಮನಸ್ಸಿಗೆ ತುಂಬಾ ನೋವಾಗಿ ಅಲ್ಲಿಂದ ಹೊರಟುಬಿಟ್ಟೆ, ವ್ಯಕ್ತಿ ಒಬ್ಬ ಡಾಕ್ಟರ್‌ ಕೂಡ ಅಲ್ಲ, ಯಾರ ಹತ್ತಿರಾನೋ ಮಾತು ಕೇಳಬೇಕಾಯ್ತಲ್ಲ ಅಂತ ಅವಮಾನಕ್ಕೆ ನೊಂದುಕೊಂಡೆ, ಯಾಕಾದರೂ ಅಲ್ಲಿಗೆ ಹೋದೆನೋ ಎಂಬ ಬೇಸರ ನನ್ನನ್ನು ಕಾಡಿತ್ತು..

ಬಹುಶಃ ಘಟನೆಯಾಗಿ ಮೂರು ವರಷದ ಮೇಲಾಗಿದೆ, ಈಗ ಅದೇ ನರ್ಸಿಂಗ್‌ ಹೋಂನ ಸಿಬ್ಬಂದಿಯಿಂದ ಪದೇ ಪದೇ ಕರೆ ಬರುತ್ತದೆ, ಮೇಡಂ ನಿಮ್ಮ ಆಸ್ಪತ್ರೆಯ ರೋಗಿಗಳ ಸಂಖ್ಯೆ ಹೆಚ್ಚಿದೆ , ತಜ್ಞ ವೈದ್ಯರ ಅವಶ್ಯಕತೆ ಇದ್ದಲ್ಲಿ ನಮಗೇ ಕಳುಹಿಸಿ ಅಂತ ಅವರೇಳುವಾಗ ನಾ ಮನಸ್ಸು ಮಾಡಿದರೆ ಅವರ ಆಸ್ಪತ್ರೆಗೆ ಹೆಚ್ಚು ರೋಗಿಗಳ ಕಳುಹಿಸಿ ಲಾಭದಾಯಕವಾಗಬಲ್ಲೆ, ಹಾಗಾಗೇ ಪದೇ ಪದೇ ನನ್ನ ಭೇಟಿ ಮಾಡುತ್ತಾರೆ, ಕರೆ ಮಾಡುತ್ತಾರೆ ಎಂಬುದು ಅರ್ಥವಾಯ್ತು...ಒಂದೇ ಒಂದು ರೋಗಿ ಅವರನ್ನು ತಲುಪಿದರೆ ನನಗೆ ಕರೆ ಮಾಡಿ ಧನ್ಯವಾದ ಹೇಳುತ್ತಾರೆ,ಹೀಗೆ ಅವರ ಕರೆ ಕೆಲ ದಿನಗಳ ಹಿಂದೆ ನಾನೇ ಬರೆದ ಸಾಲು ಅವಮಾನ ಮಾಡಿದವರೇ ನಮ್ಮನ್ನು ಗುರುತಿಸಿ ಸನ್ಮಾನ ಮಾಡುವಂತೆ ಬೆಳೆದು ನಿಲ್ಲಬೇಕು ಎಂಬುಂದ ನೆನಪಿಸಿತು, ಘಟನೆ ಹಂಚಿಕೊಳ್ಳಬೇಕೆಂದೆನಿಸಿತು..

ಅಂದು ನನ್ನ ಮೇಲೆ ರೇಗಿದ ವ್ಯಕ್ತಿ ಅಲ್ಲಿದ್ದಾರೋ ಇಲ್ಲವೋ ಗೊತ್ತಿಲ್ಲ, ಆದರೆ ಪೂರ್ವಾಪರ ಯೋಚಿಸದೇ ಯಾರ ಅರ್ಹತೆ ಯೋಗ್ಯತೆಯ ಬಗೆಗೆ ಅವರ ಮನಸ್ಸಿಗೆ ನೋವಾಗುವಂತೆ ಮಾತನಾಡುವುದು ಸರಿಯಲ್ಲ, ಮುಂದೊಂದು ದಿನ ಅವರೇ ನಮಗೆ ಸಹಾಯ ಮಾಡುವ ಎತ್ತರಕ್ಕೆ ಬೆಳೆದು ನಿಲ್ಲಬಹುದು, ಎಷ್ಟೋ ಬಾರಿ ತಮ್ಮ ಅರ್ಹತೆಯನ್ನೂ ಮರೆತು ಬೇರೆಯವರ ಮೇಲೆ ಅಧಿಕಾರದ ದರ್ಪ ತೋರುವವರೇ ಜಾಸ್ತಿ , ಆದರೆ ಅವಕಾಶ ಸಿಕ್ಕರೆ ಅವರಲ್ಲಿ ಛಲವಿದ್ದರೆ ಯಾರು ಯಾವುದೇ ಸ್ಥಾನವನ್ನಾದರೂ ಅಲಂಕರಿಸಬಹುದು ಎಂಬುದು ಮನಸ್ಸಲ್ಲಿದ್ದರೆ ಬೇರೆಯವರೊಂದಿಗೆ ವ್ಯವಹಾರ ನಡೆಸುವಾಗ ಯಾರೂ ನಮ್ಮ ಕಣ್ಣಿಗೆ ಚಿಕ್ಕವರಾಗಿ ಕಾಣಿಸುವುದಿಲ್ಲ, ಹಾಗೆಯೇ ಎಲ್ಲೋ  ಅವಮಾನವಾಯ್ತೆಂದು ಅದರ ಬಗೆಗೆ ತಲೆಕೆಡಿಸಿಕೊಂಡು ಕುಳಿತರೆ ಅಲ್ಲೇ ಕುಳಿತಿರಬೇಕಾಗುತ್ತದೆ, ನಮ್ಮ ಮೇಲೆ ನಂಬಿಕೆಯಿಟ್ಟು ನಡೆದರೆ ಅವಮಾನಿಸಿದವರೇ ನಮ್ಮನ್ನ ಗೌರವಿಸುವಂತಾಗುತ್ತದೆ...

ಯಾರನ್ನೋ  ಅವಮಾನಿಸಿದಾಕ್ಷಣ ನಾವು ದೊಡ್ಡವರಾಗುವುದಿಲ್ಲ, ಯಾರೋ ನಮ್ಮನ್ನು ಅವಮಾನಿಸಿದಾಕ್ಷಣ ನಾವು ಚಿಕ್ಕರಾಗುವುದಿಲ್ಲ... ನಾವು ಶ್ರಧ್ಧಾ ಭಕ್ತಿಯಿಂದ ನಮ್ಮ ಕರ್ತವ್ಯ ಮಾಡಿದರೆ ಮಾತ್ರ ನಾವು ದೊಡ್ಡದಾಗಿ ಬೆಳೆಯುತ್ತೇವೆ, ಹಾಗೆ ಬೆಳೆದಾಗಲೂ ಇತರರನ್ನು ಅಸಡ್ಡೆಯಿಂದ ಕಾಣದೆ ನಡೆದರೆ ಮಾತ್ರ ಅದು ದೊಡ್ಡಸ್ಥಿಕೆಯೆನಿಸಿಕೊಳ್ಳುತ್ತದೆ..


                         ಡಾ.ಶಾಲಿನಿ.ವಿ.ಎಲ್‌

Comments

Popular posts from this blog