ಕಥೆ

                   ಪ್ರೀತಿಯೆಂದರೆ???

ದೇವಸ್ಥಾನದಿಂದ ಮಗಳ ಹೆಸರಲ್ಲಿ ಪೂಜೆ ಮಾಡಿಸಿ ಪ್ರಸಾದ ಕೈಲಿಡಿದು ಬಂದ ತಾಯಿಯ ಹೆಜ್ಜೆ ಆಸ್ಪತ್ರೆಯ ವಾರ್ಡ್‌ ಕೋಣೆ ಬಾಗಿಲಲ್ಲಿ ನಿಂತುಬಿಟ್ಟಿತು, ಮಗಳ ಮೊಗದ ವೇದನೆಗೆ ತಾಯಿ ಮನ ಕಣ್ಣೀರಿಡುತ್ತಾ ವಾರ್ಡ್‌ ಬಾಗಿಲ ಹೊರಗಿ ಕುಳಿತುಬಿಟ್ಟಿತು.

ವಯಸ್ಸಿಗೆ ಬಂದ ಮಗಳು ಹಿಮನಿ, ಒಂದು ಬೆಳಿಗ್ಗೆ ಎದ್ದವಳೇ ವಾಂತಿ ಮಾಡಿಕೊಂಡು ಮೂರ್ಛೆ ಬಂದವಳಂತೆ ಕಣ್ಣು ಮೇಲೆ ಮಾಡಿಕೊಂಡು ಜೊಲ್ಲು ಸುರಿಸುತ್ತಾ ಕೈಕಾಲು ಅದುರಲು ತಂದೆ ತಾಯಿ ನಿಂತಲ್ಲೇ ನಡುಗಿಹೋದರು, ತಕ್ಷಣ ಅವಳನ್ನು ಆಸ್ಪತ್ರೆಗೆ ಕರೆತಂದ ಅವರು ಅವಳನ್ನು ವೈದ್ಯರೇಳಿದ ಎಲ್ಲಾ ಪರೀಕ್ಷೆಗೆ ಒಡ್ಡಿದರು, ವೈದ್ಯರ ಚಿಕಿತ್ಸೆಯಿಂದ ಕೊಂಚ ಚೇತರಿಸಿಕೊಂಡಿದ್ದ ಹಿಮನಿಯ ನೋಡಿಕೊಳ್ಳುತ್ತಾ ತಂದೆ ತಾಯಿ ಆಸ್ಪತ್ರೆಯಲ್ಲಿ ಪರೀಕ್ಷೆಗಳ ಫಲಿತಾಂಶಕ್ಕಾಗಿ ಕಾದು ಕೂತಿದ್ದರು.

ವೈದ್ಯರು ತಂದೆ ತಾಯಿಯನ್ನು ತಮ್ಮ ಕೋಣೆಗೆ ಬರುವಂತೆ ಹೇಳಿಕಳುಹಿಸಿದರು, ವೈದ್ಯರ ಮುಖವೂ ತುಸು ಗೊಂದಲದಲ್ಲಿತ್ತು, ತಂದೆ ತಾಯಿ ವೈದ್ಯರೆದುರು ಆಸೀನರಾಗಲು ವೈದ್ಯರು ಹುಸಿನಗೆ ಬೀರಿ ಮಾತು ಮೊದಲು ಮಾಡಿದರು, ಮತ್ತೊಮ್ಮೆ ಹಿಮನಿಯ ರಿಪೋರ್ಟ್ಸ್‌ಗಳೆಡೆ ಕಣ್ಣಾಡಿಸಿದ ವೈದ್ಯರು ನಿಮ್ಮ ಮಗಳ ಮೆದುಳಲ್ಲಿ ಒಂದು ಗೆಡ್ಡೆಯಿದ್ದು ಕ್ಯಾನ್ಸರ್‌ ಗುಣಲಕ್ಷಣಗಳಿರುವ ಗೆಡ್ಡೆ ಬ್ರೈನ್‌ ಟ್ಯೂಮರ್‌ನ ಪ್ರಕಾರ ಎಂದು ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಸರಳವಾಗಿ ಹೇಳಲು ಮುಂದಾದರು, ಕ್ಯಾನ್ಸರ್‌ ಎಂದು ಕೇಳಿದಾಕ್ಷಣ ಬೆಚ್ಚಿದ ತಾಯಿ ಕಿರುಚುತ್ತಾ ನನ್ನ ಮಗಳಿಗೆ ಕ್ಯಾನ್ಸರಾ?? ಇಲ್ಲ, ಇಲ್ಲ ಸುಳ್ಳುಹೇಳಬೇಡಿ ಎಂದು ಅಳಲಾರಂಭಿಸಿದರು, ತಾಯಿ ಹೃದಯ,ಅಪೇಕ್ಷಿಸಿದ ಪ್ರತಿಕ್ರಿಯೆಯೇ, ವೈದ್ಯರು ಅವರಿಗೆ ಸಮಾಧಾನ ಮಾಡಿ ಯುವಕರಲ್ಲೇ ಕಾಣಿಸಿಕೊಳ್ಳುವ ಕ್ಯಾನ್ಸರ್‌, ಅದರ ಗುಣಲಕ್ಷಣಗಳು, ಮುಂದೆ ಅವರು ಮಾಡಬೇಕಾಗುವ ಪರೀಕ್ಷೆ ಚಿಕಿತ್ಸೆಗಳ ವಿವರಗಳ ನೀಡುತ್ತಿರೇ ತಂದೆತಾಯಿ ಯಾವ ತಪ್ಪಿಗೆ ವಿಧಿ ನಮಗೆ ಶಿಕ್ಷೆ ನೀಡಿದ ಎಂದು ಮರುಗಿದರು. ಒಬ್ಬಳೇ ಮಗಳು, ಮುದ್ದಾಗಿ ಸಾಕಿ ಅವಳಾಸೆಯಂತೇ ಡಿಗ್ರಿ ಕಾಲೇಜಿಗೆ ಪ್ರಾಧ್ಯಾಪಕಳಾಗಿ ಕಳುಹಿಸಿದ್ದರು, ಮಗಳ ಕಾರ್ಯವೈಖರಿಯ ಜನ ಮೆಚ್ಚಿ ಹೊಗಳುವಾಗ, ಮಗಳು ಮನೆಗೆ ಆಧಾರವಾಗಿ ತಂದೆತಾಯಿಯ ಕಷ್ಟಸುಖಗಳ ನೋಡಿಕೊಂಡು ಮನೆ ಜವಾಬ್ದಾರಿ ವಹಿಸಿಕೊಂಡಿರವ ಹೊಸ್ತಿಲಲ್ಲೇ ಬಂದೆರಗಿದ ಚಂಡಮಾರುತವ ಹರಗಿಸಿಕೊಳ್ಳಲಾಗದೇ ಸೋತುನಿಂತರು.

ಗರಬಡಿದಂತೆ ನಿಂತ ದಂಪತಿಗಳಿಗೆ ನರ್ಸ್‌ ಬಂದು ಪರೀಕ್ಷೆಗಳಿಗೆ ಬಿಲ್‌ ಹಾಕಿಸಿಕೊಂಡು ಹಾಗೇ ಔಷಧಗಳನ್ನು ಬೇಗ ತನ್ನಿ, ರೋಗಿಯನ್ನು ಮತ್ತೊಂದು ಸ್ಕ್ಯಾನಿಂಗ್‌ಗೆ ಕರೆದುಕೊಂಡು ಹೋಗಬೇಕೆನಲು ವಾಸ್ತವಕ್ಕೆ ಮುಖಮಾಡಿದ ತಂದೆ ಹೆಂಡತಿಗೆ ಸ್ವಲ್ಪ ಸಮಾಧಾನದಿಂದಿರು, ಹಿಮಾಳಿಗೆ ವಿಷಯ ಹೇಳಬೇಡ, ಸ್ಕ್ಯಾನ್‌ ಆಗಲಿ ಇದರಲ್ಲಿ ಕ್ಯಾನ್ಸರ್‌ ಅಲ್ಲ ಎಂದು ಫಲಿತಾಂಶ ಬರಬಹುದು, ಕಾದುನೋಡೋಣ ಧೈರ್ಯವಾಗಿರು ಎಂದು ಬಿಲ್‌ ಕೌಂಟರ್‌ ಕಡೆ ನಡೆದರು. ತಾಯಿ ಅಲ್ಲೇ ಇದ್ದ ದೇವರ ವಿಗ್ರಹಕ್ಕೆ ಕೈಮುಗಿಯುತ್ತಾ ಮಗಳಿಗೆ ಏನೂ ತೊಂದರೆಯಾಗದಿರಲಿ ಫಲಿತಾಂಶ ಕ್ಯಾನ್ಸರ್‌ ಅಲ್ಲವೆಂದೇ ಬರಲಿ ಎಂದು ಕಣ್ಣೀರಭಿಷೇಕಗೈಯುತ್ತಾ ಪ್ರಾರ್ಥಿಸುತ್ತಾ ನಿಂತರು, ಪ್ರಾರ್ಥನೆಗೆ ದೈವ ಕಿವುಡನಾಗಿದ್ದ, ಕ್ಯಾನ್ಸರ್‌ ಗೆಡ್ಡೆಯೆಂದು ಖಚಿತವಾಯ್ತು, ವೈದ್ಯರು ಆದಷ್ಟು ಬೇಗ ರೋಗಿಗೆ ಶಸ್ತ್ರಚಿಕಿತ್ಸೆಯಾಗಬೇಕು, ಇಲ್ಲ ಬೇರೆ ಅಂಗಾಗಳಿಗೆ ಹರಡುವ ಸಾಧ್ಯತೆಯುಂಟು, ಹಾಗಾಗಿಬಿಟ್ಟರೆ ಚಿಕಿತ್ಸೆ ಕಠಿಣವಾಗಿಬಿಡುವುದು ಎಂದು ಶಸ್ತ್ರಚಿಕಿತ್ಸೆಯ ತಯಾರಿಗೆ ಹೇಳಿ ಹೊರಟುಬಿಟ್ಟರು

ಒಂದೆರೆಡು ದಿನದ ಹಿಂದೆ ಎಲ್ಲಾ ಸರಿಯಿತ್ತು, ಎಣಿಸದೇ ಬಂದ ತಿರುವು ಬದುಕ ದಿಕ್ಕೇ ತಪ್ಪಿಸಿಬಿಟ್ಟಿತು, ದಿಕ್ಕೇ ಕಾಣದಂತೆ ಜಡವಾಗಿ ನಿಂತುಬಿಟ್ಟರು ಹೆತ್ತವರು, ವಿಷಯ ತಿಳಿದ ಹಿಮಳ ಚಿಕ್ಕಪ್ಪ ಆಸ್ಪತ್ರೆಗೆ ಬಂದರು, ಅಣ್ಣ ಅತ್ತಿಗೆಗೆ ಸಮಾಧಾನ ಮಾಡಿ ಮುಂದೆ ಏನು ಮಾಡಬೇಕು ಗಮನಹರಿಸಿ ಎಂದರು, ತಾಯಿ ಏನು ಮಾಡಬೇಕು?? ಏನು ಮಾಡಬೇಕು?? ಮಗಳ ಮದುವಣಗಿತ್ತಿಯಾಗಿ ಕಾಣಬೇಕೆಂದು ಕಾದು ಕೂತವರು ಈಗ ಶಸ್ತ್ರಚಿಕಿತ್ರೆಗೆ ತಯಾರಿಮಾಡಬೇಕಾ?? ಅದು ವಿಫಲವಾದರೆ...ಶವಯಾತ್ರೆಗೆ.... ಎನ್ನುತ್ತಾ ಗಂಡನ ಎದೆಗೆ ಹೊರಗಿ ಬಿಕ್ಕಿಬಿಕ್ಕಿ ಅಳುತ್ತಾ ಗೋಳಾಡಿದರು.ಚಿಕ್ಕಪ್ಪನಿಗೆ ತಂದೆತಾಯಿಯ ನೋವು ಸಂಕಟ ನೋಡಲಾಗಲಿಲ್ಲ, ಆದರೆ ವೈದ್ಯರ ಸಲಹೆಯಂತೆ ನಡೆಯಲೇಬೇಕು, ಹೇಗೋ ಅವರನ್ನು ಸಮಾಧಾನ ಮಾಡಿ ಮನಸ್ಸು ಗಟ್ಟಿಮಾಡಿಕೊಂಡು ಶಸ್ತ್ರಚಿಕಿತ್ಸೆಗೆ ತಯಾರಿಮಾಡಿಕೊಳ್ಳಲು ಮುಂದಾದರು, ವೈದ್ಯರೇಳಿದ ಪರೀಕ್ಷೆಗಳು, ಔಷಧಗಳು ಬೇಕಾದ ಹಣ ಹೊಂದಿಸುವ ಕೆಲಸ ಭಾರವಾದ ಮನಸ್ಸಲ್ಲಿ ಒಂದೊಂದಾಗಿ ಅಣಿಯಾಯ್ತು.

ವಿಷಯವನ್ನು ಹಿಮನಿಗೆ ತಿಳಿಸಿದ್ದೀರಾ ಎಂದು ವೈದ್ಯರು ಕೇಳಲು ಹೆತ್ತವರು ಮೂಕರಾದರು, ಮಗಳಿಗೆ ಭಯಂಕರ ವಿಷಯ ತಿಳಿಸುವುದು ಯಾವುದೇ ತಂದೆತಾಯಿಗಾದರೂ ಕರಳುಕಿತ್ತು ಬರುವ ಅನುಭವ, ಆದರೆ ವೈದ್ಯರು ವಿಷಯ ತಿಳಿಸಿ ಅವಳಲ್ಲಿ ಆತ್ಮಸ್ಥೈರ್ಯ ತುಂಬುವುದು ಶಸ್ತ್ರಚಿಕಿತ್ಸೆಗೆಗಿಂತ ಮೊದಲ ಮದ್ದು, ಕ್ಯಾನ್ಸರ್‌ನಂತಹ ಖಾಯಿಲೆಗಳಿಗೆ ಮನಸ್ಥೈರ್ಯ ಮುಖ್ಯ, ಅವಳನ್ನು ಮೊದಲು ತಯಾರುಮಾಡಿ ಎಂದು ಬುದ್ದಿಹೇಳಿ ನಡೆದರು.

ಖಾಯಿಲೆಯಲಿ ಸುಸ್ತಾಗಿದ್ದ ಹಿಮನಿ ಪರೀಕ್ಷೆಗಳು ಆಸ್ಪತ್ರೆ ಔಷಧಿಗಳಿಗೆ ಬೇಸತ್ತು ಹೋಗಿದ್ದಳು, ತನ್ನಿಂದೆ ಏನು ನಡೆಯುತ್ತಿದೆ ಎಂಬುದರ ಅರಿವಿಲ್ಲದೇ ತಂದೆತಾಯಿಯನ್ನು ಕಂಡಿದ್ದೇ ಅಮ್ಮಾ, ಆಸ್ಪತ್ರೆ ಸಾಕಾಯ್ತು, ಡಿಸ್ಚಾರ್ಜ್‌ ಮಾಡಿಸಿಕೋ ಮನೆಗೆ ಹೋಗೋಣ ಎನ್ನಲು ತಾಯಿಗೆ ದುಃಖ ತಡೆಯಾಗಲಿಲ್ಲ, ಕಣ್ಣೀರಿಡುತ್ತಾ ಮಗಳನ್ನು ಅಪ್ಪಿಕೊಳ್ಳಲು ಹಿಮನಿ ಏಕೆ? ಏನಾಯ್ತು? ಎಂದು ಗಾಬರಿಯಲ್ಲಿ ಪ್ರಶ್ನಿಸಲು ಚಿಕ್ಕಪ್ಪ ಮೆಲುದನಿಯಲ್ಲಿ ಅವಳಿಗಿರುವ ಖಾಯಿಲೆ ವೈದ್ಯರ ಮಾತುಗಳ ಕಣ್ತುಂಬಿಕೊಂಡು ಹೇಳಲು ಅಲ್ಲೊಂದು ನೀರವ ಮೌನ, ಹಿಮನಿಗೆ ತನಗೆ ಕ್ಯಾನ್ಸರ್‌ ಎಂದು ತಿಳಿದದ್ದೇ ನೇರ ತಾಯಿಯ ಕಣ್ಣಲ್ಲಿ ಕಣ್ಣಿಟ್ಟು ಕಣ್ತುಂಬಿಕೊಂಡು ಒಂದು ನಗೆಬೀರಿದಳು, ಒಂದು ನೋಟದ ಹಿಂದಿನ ಅರ್ಥಕ್ಕೆ ತಾಯಿ ಮನಸ್ಸು ಕುಗ್ಗಿಹೋಯ್ತು, ಬಾಯ್ತಪ್ಪಿ ಅಂದ ಮಾತಿನ ಪಶ್ಚಾತ್ತಾಪ ಕಣ್ಣೀರಾಗಿ ಹರಿಯಿತು.

ಹಿಮನಿ ಧೈರ್ಯವಾಗೇ ವಾಸ್ತವವ ಒಪ್ಪಿದಳು, ಶಸ್ತ್ರಚಿಕಿತ್ಸೆಗೆ ಮಾನಸಿಕವಾಗಿ ತಯಾರಾದಳು, ನಾನು ಕುಗ್ಗಿದರೆ ತಂದೆತಾಯಿ ನೊಂದುಕೊಳ್ಳುವರೆಂದು ನೋವೆಲ್ಲಾ ಮನದಲ್ಲಿಟ್ಟುಕೊಂಡು ಧೈರ್ಯವಾಗಿರುವವಳಂತೇ ನಟಿಸಿದಳು, ನಟನೆಯಲ್ಲಿ ಪ್ರಾವೀಣ್ಯತೆಯಿತ್ತು, ನಟಿಸುತ್ತಲೇ ಎಲ್ಲರ ನಂಬಿಸಿ ಬದುಕಿದ್ದ ಅವಳಿಗೆ ನಟನೆ ಕಷ್ಟವಾಗಿರಲಿಲ್ಲ, ತನ್ನನ್ನ ತಾ ಸಂಬಾಳಿಸಿಕೊಂಡು ತಂದೆತಾಯಿಗೆ ಧೈರ್ಯಹೇಳಿ ಶಸ್ತ್ರಚಿಕಿತ್ಸೆಗೆ ಸಿದ್ದಳಾದಳು.

ಬೆಳಕಾದರೆ ಶಸ್ತ್ರಚಿಕಿತ್ಸೆ, ಆಪರೇಷನ್‌ ಅಂದರೆ ಏನಾಗುವುದೋ ಏನೋ ಸಹಜ ಭಯ, ಕ್ಯಾನ್ಸರ್‌ನಂತ ಭಯಂಕರ ಖಾಯಿಲೆ, ಸರ್ಜರಿ ವೇಳೆ ಆಗಬಹುದಾದ ತೊಂದರೆಗಳ ವೈದ್ಯರು ವಿವರಿಸಿ ಸರ್ಜರಿಗೆ ಒಪ್ಪಿ ಸಹಿಹಾಕಲು ಕೇಳಿದಾಗ ತಾಯಿಗೆ ಹಿಂಸೆ ಸಂಕಟ ತಡೆಯಲಾಗಲಿಲ್ಲ, ದೇವರ ಮೊರೆ ಹೋಗದೆ ಬೇರೆ ದಾರಿ ಕಾಣಲಿಲ್ಲ, ಮಗಳಿಗೆ ಯಾವ ತೊಂದರೆಯಾಗದಿರಲಿ ಎಂದು ಅವಳ ಹೆಸರಲ್ಲಿ ಪೂಜೆ ಮಾಡಿಸಿ ಬಂದ ತಾಯಿ ವಾರ್ಡ್‌ ಬಾಗಿಲಲ್ಲೇ ಮಗಳ ಪರಿಸ್ಥಿತಿ ನೆನೆದು ನೊಂದು ನಿಂತುಬಿಟ್ಟರು.

ವಾರ್ಡ್‌ ನರ್ಸ್‌, ಮೇಡಂ, ನಾಳೆ ಬೆಳಿಗ್ಗೆಯೇ ಸರ್ಜರಿ, ಹೊಟ್ಟೆಗೆ ಏನೂ ತಗೋಬೇಡಿ, ನಾನು ಮೊದಲು ಹೇಳಿರುವ ಎಲ್ಲಾ ವಿಷಯಗಳನ್ನು ಪರಿಪಾಲಿಸಬೇಕು ಎಂದು ಹಿಮಳಿಗೆ ಹೇಳತೊಡಗಿದರು, ದನಿ ಕೇಳಿ ಅಮ್ಮ ಮಗಳ ಬಳಿಗೆ ಬಂದರು, ನರ್ಸ್‌ಗೆ ಮತ್ತೊಮ್ಮೆ ಏನೇನು ಮಾಡಬೇಕೆಂದು ಕೇಳಿದರು, ದೇವರ ಕುಂಕುಮ ಮಗಳ ಹಣೆಗಿಟ್ಟ ಅಮ್ಮ ಅವಳ ಹಣೆಗೆ ಮುತ್ತಿಟ್ಟು ಹೆದರಬೇಡ ಏನೂ ಆಗಲ್ಲ ಎನ್ನಲು ಮಗಳು ಹೆದರುತ್ತಾ ಅಮ್ಮಾ ಅಮ್ಮಾ ಎನ್ನುತ್ತಾ ತೊದಲುತ್ತಾ ನಾನೊಮ್ಮೆ ಒಮ್ಮೆಯೇ ಒಮ್ಮೆ ಕರೆ ಮಾಡಲೇ?? ನಾಳೆ ಸರ್ಜರಿ ಏನಾಗತ್ತೋ ಏನು ಒಮ್ಮೆ ಕರೆ ಮಾಡಿ ಕ್ಷಮಿಸು ಎನ್ನುವೆ ಪ್ಲೀಸ್‌ ಎಂದು ಅಂಗಲಾಚಿದಳು, ತಾಯಿಗೆ ಕೋಪ ತಡೆಯಲಾಗಲಿಲ್ಲ, ಮಗಳ ಫೋನ್‌ ಅವಳ ಮಂಚದ ಮೇಲೆಸೆದು ಅಳುತ್ತಾ ಹೊರನಡೆದರು, ಬಾಗಿಲಲ್ಲಿ ಅಮ್ಮ ಮಗಳ ಸಂಭಾಷಣೆ ಕಂಡ ತಂದೆ ಹೆಂಡತಿಗೆ ಸಮಾಧಾನ ಮಾಡಿಕೊಂಡು ಹೊರಗೆಕರೆದುಕೊಂಡು ಹೋದರು.

ಹಿಮ ಕಣ್ತುಂಬಿಕೊಂಡು ಫೋನ್‌ ಕೈಗೆ ಎತ್ತಿಕೊಂಡಳು, ನಡುಗುವ ಕೈಲಿ ಬ್ಲಾಕ್‌ ಲಿಸ್ಟ್ ಇಂದ ಹೆಸರ ಅನ್ ಬ್ಲಾಕ್‌ ಮಾಡಿದಳು,ನಾಲ್ಕೈದು ಬಾರಿ ಕರೆಮಾಡಲು ಹೋಗಿ ರಿಂಗ್‌ ಆಗುವುದರೊಳಗೇ ಕರೆ ಕತ್ತರಿಸುತ್ತಿದ್ದಳು, ನೋವು ಅಳುಕು ಹಿಂಜರಿಕೆ ಅವಳ ಖಾಯಿಲೆಗಿನ್ನಾ ಹೆಚ್ಚು ಹಿಂಸಿಸಿತ್ತು, ಗುಂಡಿಗೆ ಗಟ್ಟಿ ಮಾಡಿಕೊಂಡು ಸಲ ಕರೆಕತ್ತರಿಸದೇ ರಿಂಗ್‌ ಆಗಲು ಕಾದಳು, ಕಡೆಯಿಂದ ಹಲೋ ಹಿಮ ಎನಲು ದುಃಖ ತಾಳಲಾಗಲಿಲ್ಲ, ಬಿಕ್ಕಿಬಿಕ್ಕಿ ಅಳಲಾರಂಭಿಸಿದಳು, ಅವಳ ಅಳುವ ದನಿ ಕೇಳಿ ಬೆದರಿದ ಅವ ಹಲೋ ಹಿಮ ಹಿಮ ಮಾತಾಡು ಏನಾಯ್ತು?? ಏಕೆ ಅಳುತ್ತಿರುವೆ?? ಹಲೋ ಹಲೋ ಎನ್ನಲು ಮೆಲುದನಿಯಲಿ ಹಿಮ, ಜೇಷ್ಠ,  I’m sorry I’m sorry ಹೇಳದೇ ಕಾರಣ ನಡೆದೆ ನಿನ್ನಿಂದ ದೂರ ಕ್ಷಮಿಸು, ನೀ ಚೆನ್ನಾಗಿರು ಎಂದು ಒಂದೇ ಉಸಿರಲ್ಲಿ ಹೇಳಿ ಕರೆಕತ್ತರಿಸಿಬಿಟ್ಟಳು. ಫೋನ್‌ ರಿಂಗ್‌ಟೋನ್‌ ಮತ್ತೆ ಮತ್ತೆ ಸದ್ದುಮಾಡಲು ಫೋನ್‌ ಸೈಲೆಂಟ್‌ ಮಾಡಿ ಅಳುತ್ತಾ ಅಳುತ್ತಾ ನೆನಪಿನ ಬುತ್ತಿಗೆ ಜಾರಿದಳು.

3 ವರುಷದ ಹಿಂದೆ ಹೊಸದಾಗಿ ಕಾಲೇಜಿಗೆ ಪ್ರಾಧ್ಯಾಪಕಳಾಗಿ ಕೆಲಸಕ್ಕೆ ಸೇರಿದ್ದ ಹಿಮಳಿಗೆ ಕಾಲೇಜಿನವರು ವಿದ್ಯಾರ್ಥಿಗಳ ಒಂದು ಸಂಶೋಧನೆಯ ಸಲುವಾಗಿ ಅವಳಿಗೆ ಅವರನ್ನು ದಾವಣಗೆರೆಗೆ ಕರೆದೊಯ್ಯುವ ಜವಾಬ್ದಾರಿ ನೀಡಿದ್ದರು, 10 ಜನ ತನ್ನ ವಿದ್ಯಾರ್ಥಿಗಳ ಕರೆದೊಯ್ದ ಹಿಮ ಬಹಳ ಖುಷಿಖುಷಿಯಾಗಿ ತನ್ನ ಕರ್ತವ್ಯ ನಿಭಾಯಿಸಿದ್ದಳು, ಅನೇಕ ಬೇರೆ ಕಾಲೇಜಿನವರ ಪರಿಚಯ ಒಡನಾಟ ಹೊಸ ಅನುಭವಗಳ ನೀಡಿತ್ತು.ವಾಪಸ್ಸಾದ ಹಿಮನಿ ಮತ್ತೆ ತನ್ನ ದಿನಚರಿ ಮುಂದುವರೆಸಿದ್ದಳು.

ಹಿಮನಿ ಓದುತ್ತಿರುವಾಗಲೇ ಮನೆಯಲ್ಲಿ ವರಾನ್ವೇಷಣೆ ಮೊದಲಾಗಿತ್ತು, ಫೋಟೋ ಕಳುಹಿಸುವುದು, ಜಾತಕ ಲೆಕ್ಕಾಚಾರ, ಕಾಫಿ-ಟೀ ಮಾತುಕತೆಗಳು ನಡೆಯುತ್ತಲೇ ಇತ್ತು. ಒಬ್ಬಳೇ ಮಗಳು ಅದ್ದೂರಿಯಾಗಿ ಮದುವೆ ಮಾಡಿಕೊಡುವ ಕನಸು ಹೆತ್ತವರದು, ಆದರೆ ಜಾತಕದ ಒಂದು ಸಣ್ಣ ದೋಷ ಅವರ ಕನಸಿಗೆ ಅಡ್ಡವಾಗಿತ್ತು, ದೋಷದ ಪರಿಹಾರಕ್ಕಾಗಿ ಸುತ್ತದ ದೇವಸ್ಥಾನವಿಲ್ಲ, ಮಾಡದ ಪೂಜೆಗಳಿಲ್ಲ, ಆದರೆ ಯಾವುದೂ ಫಲ ನೀಡಿರಲಿಲ್ಲ, ಮದುವೆ ಕನಸು ಕನಸಾಗೇ ಉಳಿದಿತ್ತು, ಪ್ರಯತ್ನ ಎಡಬಿಡದೆ ಸಾಗಿತ್ತು.

ದಾವಣಗೆರೆಯಲ್ಲಿ ಭೇಟಿಯಾಗಿದ್ದ ಪ್ರಾಧ್ಯಾಪಕರ ಸ್ನೇಹ ಫೋನ್‌ನಲ್ಲಿ ಮುಂದುವರೆದಿತ್ತು, ಕೆಲವರು ಆತ್ಮೀಯರಾಗಿದ್ದರು. ಅದರಲ್ಲಿ ಒಬ್ಬ ಜೇಷ್ಠ, ಬಹಳ ಬುದ್ದಿವಂತ, ವಿದ್ಯಾರ್ಥಿಗಳ ಮೆಚ್ಚಿನ ಗುರು, ಹಿಮ ಹಾಗೂ ಜೇಷ್ಠ ವಿಷಯ ಜ್ಞಾನದ ಹಂಚಿಕೆಯಲ್ಲಿ ಜೊತೆಯಾದವರು ದಿನಕಳೆದಂತೆ ಒಳ್ಳೆಯ ಸ್ನೇಹಿತರಾದರು,ಬೇರೆಬೇರೆ ಊರಲ್ಲಿದ್ದರೂ ಕೆಲಸ ವೈಯಕ್ತಿಕ ವಿಷಯಗಳ ಫೋನ್‌ನಲ್ಲಿ ಹಂಚಿಕೊಳ್ಳುತ್ತಿದ್ದರು.

ಹೀಗೇ ಒಂದು ದಿನ ಹಿಮನಿ ಮನೆಗೆ ಗಂಡಿನ ಕಡೆಯವರು ಬಂದು ಉಪ್ಪಿಟ್ಟು ಚಹಾ ಕುಡಿದು ಹೋದರು, ನಂತರದಲ್ಲಿ ಅವಳ ತಂದೆ ಕರೆ ಮಾಡಿದಾಗ ಮಗಳ ಜಾತಕದ ಅವಲಕ್ಷಣಗಳ ಎತ್ತಾಡಿ ಅವಮಾನ ಮಾಡಿದ್ದರು, ತಂದೆ ತಾಯಿ ಅದರಿಂದ ನೊಂದಿರುವುದ ಕಂಡ ಹಿಮನಿಗೆ ಬೇಸರವಾಗಿತ್ತು, ವರುಷಗಳಿಂದ ಇದೇ ರಾಮಾಯಣ ಕಂಡ ಅವಳಿಗೆ ಮದುವೆಯೆಂದರೆ ಸಿಟ್ಟು ಬರುತ್ತಿತ್ತು, ಅವಳು ಅದೇ ಬೇಸರದಲ್ಲಿದ್ದಾಗ ಜೇಷ್ಠ ಯಾವುದೋ ವಿಷಯಕ್ಕಾಗಿ ಮೆಸೇಜ್‌ ಮಾಡಿದ್ದ, ಮಾತು ಮುಂದುವರೆದಂತೆ ಅವಳ ಬೇಸರ ಅರಿತ ಜೇಷ್ಠ ಏನೆಂದು ವಿಚಾರಿಸಲು ಹಿಮ ತನ್ನ ಕಥೆ ವ್ಯಥೆಯ ವಿವರಿಸಿದಳು. ಅವಳಿಗೆ ಸಮಾಧಾನ ಮಾಡಿದ ಜೇಷ್ಠ ಅವಳನ್ನು  ಕ್ಷಣಕ್ಕೆ ನೋವಿಂದ ಹೊರ ತಂದಿದ್ದ

ಅದೇ ರಾತ್ರಿ ಜೇಷ್ಠನಿಂದ ಹಿಮನಿಗೆ ಪ್ರೇಮನಿವೇದನೆಯಾಗಿತ್ತು, ಹಿಮಳಿಗೆ ಕಸಿವಿಸಿಯಾಯ್ತು ಆದರೆ ಜೇಷ್ಠ ದಾವಣಗೆರೆಯಲ್ಲಿ ಅವಳನ್ನು ಕಂಡಾಗಲೇ ಅವಳ ವ್ಯಕ್ತಿತ್ವ ಗುಣ ರೂಪಕ್ಕೆ ತಾ ಸೋತು ಹೋಗಿದ್ದ, ನಂತರದ ಸ್ನೇಹ ಬಾಂದವ್ಯವಾಗಲಿ ಎಂದು ಬಯಸಿದ್ದ, ಆಲೋಚನೆ ಚಿಂತನೆಗಳು ಒಂದೇ ಇರುವಾಗ ಇವಳು ನನ್ನ ಸಂಗಾತಿಯಾದರೆ ಬಲು ಚೆಂದವೆಂದು ಭಾವಿಸಿದ್ದ, ಇವೆಲ್ಲವಾ ಅವಳಿಗೆ ವಿವರಿಸಿ ಜಾತಕ ಸೂತಕ ಎಲ್ಲಾ ನಂಬುವವನಲ್ಲ ನಾ, ನಿಮ್ಮ ಅಭಿಪ್ರಾಯ ತಿಳಿಸಿದರೆ ತನ್ನ ತಂದೆ ತಾಯಿಯೊಂದಿಗೆ ಮನೆಗೆ ಬಂದು ಮಾತನಾಡುವೆ ಎಂದ

ಶಾಸ್ತ್ರ ಸಂಪ್ರದಾಯದ ಮಡಿವಂತಿಕೆಯಲಿ ಬೆಳೆದ ಹಿಮನಿಗೆ ಪ್ರೀತಿಪ್ರೇಮ ತಪ್ಪೆಂಬ ಭಾವ, ಜಾತಿ ಅಂತಸ್ತುಗಳ ತಾಪತ್ರಯ, ಬೇಡ ಇದ್ಯಾವುದೂ ಸರಿಯಿಲ್ಲ ಎಂದು ಅವನಿಗೆ ನಾವು ಸ್ನೇಹಿತರಷ್ಟೇ ಎಂಬ ಉತ್ತರ ನೀಡಿದಳು, ಅವಳು ತಿರಸ್ಕರಿಸಿದ ಮೇಲೆ ಒತ್ತಡ ಹಾಕಿ ಅವಳ ಒಪ್ಪಿಸಲೂ ಅವನಿಗೆ ಮನಸ್ಸಾಗಲಿಲ್ಲ,, ಆದರೆ ಗೊತ್ತಿಲ್ಲದೇ ಅರಳಿದ್ದ ಪ್ರೀತಿ ಇಬ್ಬರೂ ದೂರದೂರವಾಗಿ ಬದುಕಲು ಬಿಡಲಿಲ್ಲ, ಬೇಡ ಬೇಡ ಎಂದರೂ ಬಾಂದವ್ಯ ಗಟ್ಟಿಯಾಗುತ್ತಾ ಸಾಗಿತು, ಮಾತುಕಥೆಗಳು ಹೆಚ್ಚಾಯ್ತು, ಒಬ್ಬರಿಗೊಬ್ಬರು ಹೆಚ್ಚು ಪರಿಚಯವಾದಾಗ ಇಬ್ಬರಿಗೂ ತಾವು ಬಯಸಿದ್ದ ಪ್ರೀತಿ ಗುಣಗಳು ಇನ್ನೊಬ್ಬರಲ್ಲಿ ಕಂಡವು, ಸಂಭಾಷಣೆಯಲಿ ವಿನಿಮಯವಾಗದ ಪ್ರೀತಿ ನಡುವಳಿಕೆಯಲಿ ಹಂಚಿಕೆಯಾಗಿತ್ತು, ಪ್ರೇಮಕಾವ್ಯ ಮುನ್ನುಡಿ ಬರೆದಿತ್ತು

ಮತ್ತೆ ಹಿಮನಿ ಮನೆಯಲ್ಲಿ ಜಾತಕದ ರಂಪಾಟ ಶುರುವಾಗಲು ಹಿಮನಿ ತಂದೆತಾಯಿಗೆ ಮೋಸಮಾಡಿ ಜೇಷ್ಠನೊಂದಿಗೆ ಸಲುಗೆಯಿಂದಿರುವುದು ತಪ್ಪೆಂದು ಪಶ್ಚಾತ್ತಾಪ ಪಟ್ಟುಕೊಂಡು ಮೂರನೆಯವರಿಂದ ವಿಷಯ ತಿಳಿದರೆ ನೊಂದುಕೊಂಡಾರು, ಹಾಗೆಯೇ ಅವರಿಗೆ ನನ್ನ ಮದುವೆ ಯೋಚನೆಯಿದೆ, ಬಂದವರೆಲ್ಲಾ ಜಾತಕದ ನೆಪ ಹೇಳಿ ಅವಮಾನಿಸುತ್ತಿರಲು ನಾನಿರುವಂತೇ ನನ್ನ ಒಪ್ಪಿದ ಜೇಷ್ಠನನ್ನು ಅವರು ಒಪ್ಪಬಹುದೇನೋ, ಜಾತಿ ಸಂಪ್ರದಾಯಗಳ ಮೀರಿ ನನಗಾಗಿ ನನ್ನ ಖುಷಿಗಾಗಿ ಎಂದು ರಾತ್ರಿ ಧೈರ್ಯ ಮಾಡಿ ಊಟದ ಸಮಯಕ್ಕೆ ತನ್ನ ತಂದೆತಾಯಿಯೆದುರು ವಿಷಯ ಪ್ರಸ್ತಾಪ ಮಾಡಿದಳು.

ವಿಷಯ ಕೇಳಿದ್ದೇ ಊಟದ ತಟ್ಟೆಗೆ ನೀರು ಬಿತ್ತು, ಕೆಂಡಾಮಂಡಲವಾದ ತಂದೆತಾಯಿಯ ಪ್ರತಾಪ ಮಗಳ ಮೇಲೆ. ಹಿಮನಿ ಜೇಷ್ಠ ಒಳ್ಳೆಯವನೆನ್ನಲು ಎಷ್ಟು ದಿನ ಅವನೊಂದಿಗಿರುವೆ ಅವನು ಒಳ್ಳೆಯವನೆನಲು, ಫೋನ್‌ನಲ್ಲಿ ನಾಕು ಬೆಣ್ಣೆ ಮಾತನಾಡಿದವನ ನಾಚಿಕೆಯಿಲ್ಲದೆ ನಮ್ಮ ಮುಂದೆ ಹೊಗಳುತ್ತೀಯಾ? ಜಾತಿ ಸಂಪ್ರದಾಯ ಅಂತಸ್ತು ಮರೆತು ಯೋಗ್ಯತೆಯಿಲ್ಲದವನಿಗೆ ಫೋನ್‌ನಲ್ಲಿ ನಿನ್ನ ಮರಳು ಮಾಡಿದವನಿಗೆ ಕನ್ಯಾದಾನ ಮಾಡಿಕೊಡುವಷ್ಟು ದುಸ್ಥಿತಿಗೆ ನಾವಿನ್ನು ಬಂದಿಲ್ಲ ಎನಲು ಹಿಮನಿಗೆ ಜಾತಕ ರಾಮಾಯಣ,ಜೇಷ್ಠನ ಪ್ರೀತಿ ಕಾಳಜಿ, ತನ್ನ ವಯಸ್ಸಿನವರೆಲ್ಲಾ ಮದುವೆಯಾಗಿ ಖುಷಿಯಾಗಿರಲು ತನ್ನ ಕಾಲಮೇಲೆ ನಿಂತಿರುವ ನನಗೆ ಯೋಗ್ಯನಾದ ವರ ಆಯ್ಕೆ ಮಾಡುವ ಹಕ್ಕಿಲ್ಲವೇ? ಬುದ್ದಿವಂತಿಕೆಯಿಲ್ಲದೆ ಅವನ ಮಾತಿನ ಗಾಳಕ್ಕೆ ಬಿದ್ದವಳಾ ನಾ ಎಂದು ಬೇಸರವಾಗಿ ಅವಳೂ ಹೆತ್ತವರ ವಿರುದ್ದ ಬಾಯಿಮಾಡಲು, ಅವನನ್ನು ವಹಿಸಿಕೊಂಡು ಜನುಮಕೊಟ್ಟವರಿಗೆ ತಿರುಗಾಡುವೆಯೇ ಅವನ ಮಾಟಮಂತ್ರಕ್ಕೆ ವಶವಾಗಿರುವೆ ಲಜ್ಜೆಗಟ್ಟವಳೇ ಕುಲಕ್ಕೆ ಕಳಂಕವೆಂದು ಅವಳ ಹುಟ್ಟಿನಿಂದ ಇಲ್ಲಿಯವರೆಗೆ ಅವಳ ಸಾಕಲು ಅವರು ಪಟ್ಟ ಕಷ್ಟವೆಲ್ಲಾ ಅವಳಿಗೆ ನೆನಪಿಸಿ ನಾಕು ಜನದ ಮುಂದೆ ನಮ್ಮ ಮರ್ಯಾದೆ ಕಳೆಯಬೇಡ ಎಂದು ರೇಗಿದರು. ವಿದ್ಯಾವಂತೆ ವಿಚಾರವಂತೆಯಾದ ಹಿಮನಿಗೆ ಜಾತಕಕ್ಕಾಗಿ ನನ್ನ ಅವಮಾನ ಮಾಡಿದವರ ಕಾಲಿಡಿಯಲೂ ಸಿದ್ದರಿದ್ದ ಹೆತ್ತವರು ನನ್ನ ಗುಣ ನೋಡಿ ಮೆಚ್ಚಿ ಬಂದವನ ಜಾತಿ ಅಂತಸ್ತು ಅಳೆದು ಅವಮಾನ ಮಾಡುತ್ತಿಹರಲ್ಲಾ?? ಇವರು ನನ್ನ ಮದುವೆ ಕನಸು ಕಂಡದ್ದು ನನ್ನ ಖುಷಿಗಾಗಾ, ಇಲ್ಲ ನಾಕು ಜನದ ಮುಂದೆ ತಮ್ಮ ಪ್ರತಿಷ್ಠೆ ಮೆರೆಯಲಾ ಎಂಬ ಪ್ರಶ್ನೆ ಮೂಡಿ ಮನಸ್ಸು ಚಿದ್ರವಾಯಿತು, ತಮ್ಮ ಪ್ರೀತಿ ವಿಚಾರವಾಗಿ ಮನೆಯಲ್ಲಾದ ರಾಮಾಯಣ ಜೇಷ್ಠನಿಗೆ ಹೇಳಿ ಮನೆಯವರಿಗಾಗಿ ದೂರವಾಗುವ ಎಂದು ಸಂದೇಶವಿತ್ತಳು, ಮನಸ್ಸು ಭಾರ ಮಾಡಿಕೊಂಡು ಹೆತ್ತವರಿಗಾಗಿ ಬೇರಾಗುವ ಮನಸ್ಸು ಮಾಡಿದರು.

ಮಗಳ ಪ್ರೀತಿ ಕೇಳಿದ ಮೇಲೆ ಯಾರಿಗಾದರೂ ಅವಳನ್ನು ಕಟ್ಟಬೇಕೆಂದು ತರಾತುರಿಯಲ್ಲಿ ಹೆತ್ತವರು ಕಾರ್ಯಾಚರಣೆ ಮಾಡಲು ಜಾತಕದ ಭೂತ ಅವರ ಪ್ರಯತ್ನವ ವಿಫಲಗೊಳಿಸುತ್ತಿತ್ತು, ತಂದೆತಾಯಿಯ ಕೆಂಗಣ್ಣಿಗೆ ಗುರಿಯಾದ ಹಿಮನಿ ಮನೆಯವರಿಗೆ ಶತೃವಂತೆ ಕಾಣುತ್ತಿದ್ದಳು, ಜಾತಕದ ತಲೆನೋವು,ಮನೆಯವರ ವರ್ತನೆ,ಮರೆಯಲಾಗದ ಜೇಷ್ಠನ ನೆನಪುಗಳು ಅವಳನ್ನು ಕುಗ್ಗಿಸಿತ್ತು, ಮತ್ತೆ ಜೇಷ್ಠನೊಂದಿಗೆ ಮಾತುಕಥೆ ಮುಂದುವರೆದಿತ್ತು. ಸ್ನೇಹಿತರಾಗಿಯಾದರೂ ಒಬ್ಬರಿಗೊಬ್ಬರು ಜೊತೆಯಾಗಿರಲು,ಮನೆಯವರಿಗೆ ಇವರಿಬ್ಬರೂ ಮಾತು ಮುಂದುವರಿಸಿರುವುದು ತಿಳಿದು ನಮ್ಮ ಮಾತು ಮೀರಿ ಪ್ರೀತಿ ಮುಂದುವರೆಸಿದ್ದಾರೆಂದು ಕೋಪ, ಮನೆ ರಣರಂಗವಾಯಿತು, ಹೆತ್ತವರ ಸಂಕಟ ಮುಗಿಲುಮುಟ್ಟಿ ಆಕ್ರೋಶ ತಾಳ್ಮೆ ಮೀರಿ ಅನಾಹುತಕ್ಕೆ ಕಾದಿತ್ತು, ಹಿಮನಿ- ಹೆತ್ತವರ ಮಧ್ಯೆ ವಾಗ್ವಾದ ಹೆಚ್ಚಾಗಿ ಪರಿಸ್ಥಿತಿ ಕೈತಪ್ಪಿತ್ತು, ಹಿಮನಿ ತಂದೆಯಿಂದ ಅವಳಿಗೆ ಕಪಾಳಮೋಕ್ಷ ,ಹಿಮನಿ ತಾಯಿಯಿಂದ ಹೆತ್ತವರ ಕರುಳಿಗೆ ಬೆಂಕಿಯಿಟ್ಟ ನಿನ್ನ ದೇವರು ಕ್ಷಮಿಸುವುದಿಲ್ಲ, ಭಯಾನಕ ಖಾಯಿಲೆ ಕ್ಯಾನ್ಸರ್‌ ಬಂದು ಸಾಯುವೆ ಎಂಬ ಶಾಪ. ಕೊನೆಗೆ ಹೆದರಿಸಿ ಬೆದರಿಸಿ ಫೋನ್‌ ಕಿತ್ತುಕೊಂಡು ಜೇಷ್ಠನ ನಂಬರ್‌ ಬ್ಲಾಕ್‌ ಮಾಡಿ ಮತ್ತೊಮ್ಮೆ ಅವನಿಗೆ ಕರೆ ಮಾಡಿದರೆ ಮನೆದೇವರ ಹಾಗೂ ನನ್ನ ಮೇಲಾಣೆ ಎಂದು ತಾಯಿ ಅವಳ ಕೈಕಟ್ಟಿಹಾಕಿಬಿಟ್ಟರು. ತದನಂತರ ಹಿಮನಿಗೆ ಬೇರೆ ದಾರಿಯಿಲ್ಲದೇ ಅವನಿಂದ ದೂರಾಗಿ ಒಂಟಿಯಾಗಿಬಿಟ್ಟಳು, ಜೇಷ್ಠನಿಗೂ ಕರೆಮಾಡಿದ ಮನೆಯವರು ಮಗಳ ತಂಟೆಗೆ ಬರದಂತೆ ಖಡಕ್‌ ಎಚ್ಚರಿಕೆ ನೀಡಿದ್ದರು, ಅಲ್ಲಿಗೆ ಪ್ರೇಮಪಕ್ಷಿಯ ಕತ್ತು ಜಾತಿ ಅಂತಸ್ತು ಪ್ರತಿಷ್ಠೆಗಳು ಹಿಸುಕಿಹಾಕಿ ಉಸಿರನಿಲ್ಲಿಸಿತ್ತು.

ಜೇಷ್ಠ -ಹಿಮ, ನೀ ನಿಮ್ಮ ಮನೆಯ ಸುಂದರ ಹೂ, ನಿನ್ನ ಯಾರೋ ದಾರಿಹೋಕ ಕಿತ್ತುಕೊಂಡರೆಂಬ ಭಯ ಹೆತ್ತವರಿಗೆ, ನನ್ನಿಂದ ನೀ ನಿಮ್ಮ ಮನೆಯಲ್ಲಿ ಕೆಟ್ಟವಳಾಗುವುದು ಬೇಡ, ನಾ ನಿನಗೆ ತೊಂದರೆಯೂ ಕೊಡಲ್ಲ, ಅವರು ಒಳ್ಳೆಯ ಹುಡುಗನನ್ನೇ ನಿನಗೆ ಮದುವೆ ಮಾಡುವರು, ಎಲ್ಲೋ  ನೀ ಖುಷಿಯಾಗಿದ್ದರೆ ಸಾಕು ನನಗೆ, ನನ್ನನ್ನು ಅಂದರೆಂದು ನಿನ್ನ ತಂದೆತಾಯಿಯ ದೂರಬೇಡ, ಹೆತ್ತವರಿಗೆ ಮಕ್ಕಳೆಂದರೆ ಅವರ ಪ್ರಪಂಚ, ನಾವು ಆಯ್ಕೆ ಮಾಡಿದ್ದಷ್ಟೇ ಮಕ್ಕಳಿಗೆ ಒಳಿತು, ಅವರಿಗೆ ಆಯ್ಕೆ ಕೊಟ್ಟರೆ ಆತುರದಲಿ ಅಚಾತುರ್ಯವಾದರೆಂಬ ಭಯ, ಅವರು ನಿನ್ನನ್ನು ಹೆಚ್ಚು ಪ್ರೀತಿಸುತ್ತಾರೆ, ಅವರ ಪ್ರೀತಿಗಿಂತ ನಮ್ಮ ಪ್ರೀತಿ ಹೆಚ್ಚಲ್ಲ ಅವರೊಂದಿಗೆ ಖುಷಿಯಾಗಿರು, ಅಷ್ಟೇ ನನ್ನ ವಿನಂತಿ ಎಂದು ಸಂದೇಶ ಕಳುಹಿಸಿ ಅವಳಿಂದ ದೂರ ಉಳಿದ.

ಕೊನೆಗೊಮ್ಮೆ ಕ್ಷಮಿಸು ಎಂದು ಮರುಉತ್ತರಿಸಲೂ ತಾಯಿ ಆಣೆ ಅವಳ ಕಟ್ಟಿಹಾಕಿಬಿಟ್ಟಿತು, ಮೌನವಾಗಿ ಮಂಕಾಗಿಬಿಟ್ಟಳು, ಮಾತು ಮುರಿದು ನಂಬಿಕೆ ಕಳೆದುಕೊಂಡ ಮಗಳಾಗಿ ಚುಚ್ಚುಮಾತುಗಳಲಿ, ಪ್ರೀತಿ ಕೈಚೆಲ್ಲಿ ನಿರ್ಗತಿಕಳಂತೆ, ಮುಂದೇನು ಎಂಬುದೇ ಗೊತ್ತಿರದೆ ಜಗದ ಮುಂದೆ ನಗುವಿನ ಮುಖವಾಡ ಹಾಕಿಕೊಂಡು ಪ್ರತಿರಾತ್ರಿ ಹಣೆಬರಹವ ಶಪಿಸಿಕೊಂಡು ಕಣ್ಣೀರಲ್ಲೇ ಕೈತೊಳೆಯುತ್ತಾ ಕಾಲತಳ್ಳಿದಳು

ವರುಷಗಳುರುಳಿದರೂ ಹೆತ್ತವರ ಮದುವೆ ಪ್ರಯತ್ನ ಫಲಿಸಲಿಲ್ಲ, ಜೇಷ್ಠ ಮನಸ್ಸಿಂದ ಮರೆಯಾಗಲಿಲ್ಲ, ತಾಯಿಯ ಶಾಪದ ಫಲವೋ , ಹೆತ್ತವರ ಮಾತಿಗೆ ಕಿವಿಗೊಟ್ಟು ನಿರ್ಮಲ ಪ್ರೀತಿಯ ತಿರಸ್ಕಾರದ ಶಾಪವೋ ಕ್ಯಾನ್ಸರ್‌ ರೋಗಿಯಾಗಿ ಯಮನ ಕರೆಗೆ ಕಾಯುತ್ತಾ ಹಾಸಿಗೆ  ಮೇಲೆ ಕಾಯುತ್ತಾ ಮಲಗಿದ್ದ ಅವಳಿಗೆ ಕೊನೆಗೊಮ್ಮೆ ಅವನ ಕ್ಷಮೆಯಾಚಿಸಿದ ಸಮಾಧಾನ, ಇನ್ನು ತಾನೂ ಸತ್ತರೂ ಚಿಂತೆಯಿಲ್ಲವೆಂಬ ಭಾವ, ಅಳುತ್ತಲೇ ಮಲಗಿಬಿಟ್ಟಳು.

ಮರುದಿನ ಬೆಳಕಾಗಲು ಸರ್ಜರಿ ಭಯ, ತಂದೆತಾಯಿ ಮಗಳ ತಯಾರುಮಾಡಿರಲು ಅವಳ ಪರೀಕ್ಷಿಸಿದ ವಾರ್ಡ್‌ ನರ್ಸ್‌ ಬಿಪಿ ಏರುಪೇರಾಯ್ತಲ್ಲಾ, ರಾತ್ರಿ ಸರಿಯಾಗಿ ಮಲಗಲಿಲ್ಲವಾ?? ಏಕೆ ಭಯಾನಾ?? ಆರಾಮಾಗಿರಿ ಎನಲು ತಾಯಿ ಮತ್ತೆ ಮಗಳ ಮುಖ ನೋಡಿ ಏಕೆ ಹೀಗೆ ನನ್ನ ಹೊಟ್ಟೆಗೆ ಬೆಂಕಿ ಹಾಕುತ್ತಿರುವೆ, ಅಂದು ಹಠಮಾಡಿ ನಿನ್ನ ಮದುವೆ ಕನಸಿಗೆ ಬೆಂಕಿ ಹಾಕಿದೆ, ಇಂದು ಮತ್ತೆ ಅವನ ನೆನಪಲ್ಲಿ ಆರೋಗ್ಯ ಹಾಳುಮಾಡಿಕೊಳ್ಳುತ್ತಿರುವೆ, ಹೇಗೆ ಬೆನ್ನಿಗೆ ಬಿದ್ದನೋ ಶನಿ ಎಂದು ಮತ್ತೆ ಅವನ ಶಪಿಸುವ ವೇಳೆಗೇ ಜೇಷ್ಠ ಅವಳ ವಾರ್ಡ್‌ ಬಾಗಿಲಲ್ಲಿ ಹಾಜರಾಗಿದ್ದ, ಅವನನ್ನು ಕಂಡಿದ್ದೇ ಹಿಮ ಕುಸಿದುಹೋದಳು, ತಂದೆತಾಯಿ ಕೆಂಡಾಮಂಡಲವಾದರು, ವಿಷಯ ತಿಳಿದ ಚಿಕ್ಕಪ್ಪ ಅಣ್ಣ-ಅತ್ತಿಗೆಗೆ ಸಮಾಧಾನ ಮಾಡಿ ಹೊರಗೆ ಕರೆದುಕೊಂಡು ಹೋದರು

ರಾತ್ರಿ ಹಿಮ ಕರೆಮಾಡಿದ ನಂತರ ಗಾಬರಿಗೊಂಡ ಜೇಷ್ಠ ಅವಳ ಬಗೆಗೆ ವಿಚಾರಿಸಲು ವಿಷಯ ತಿಳಿಯಿತು, ಮರುದಿನ ಸರ್ಜರಿ ಹೊತ್ತಲ್ಲಿ ನನಗೆ ಕರೆಮಾಡಿಹಳೆಂದರೆ ಅವಳ ಎದೆಯಲ್ಲಿ ನಾನು ಚಿರಾಯು ಎಂದವನೇ ರಾತ್ರಿಯೇ ದೂರದೂರಿಂದ ಅವಳ ಕಾಣಲು ಓಡೋಡಿ ಬಂದಿದ್ದ, ಅವಳನ್ನು ಇದೊಂದು ದುಸ್ಥಿತಿಯಲ್ಲಿ ಕಾಣುವ ಕೆಟ್ಟ ಹಣೆಬರಹ ಅವನದು. ಅವರಿಬ್ಬರ ಸಂಪರ್ಕ ಕಡಿತಗೊಳಿಸಿ ನಾವು ಗೆದ್ದೆವು ಎಂದುಕೊಂಡಿದ್ದ ತಂದೆತಾಯಿ ಸೋತಿದ್ದರು, ಇವರಿಬ್ಬರೂ ಮನಸ್ಸಲ್ಲೇ ಒಬ್ಬರೊನ್ನಬ್ಬರು ಪ್ರೀತಿಸುತ್ತಾ ಬದುಕಿದ್ದರು. ಅಲ್ಲಿ ಮಾತುಗಳಿಗೆ ಜಾಗವೇ ಇರಲಿಲ್ಲ, ಮನಸ್ಸುಗಳು ಮಾತನಾಡಿಕೊಂಡವು, ಜೇಷ್ಠ ಹಿಮಳಿಗೆ ಸರ್ಜರಿಯ ಧೈರ್ಯದಿಂದ ಎದುರಿಸುವಂತೆ ಚೇತನ ನೀಡಿದ, ಭಾವನೆಗಳ ಏರಿಳಿತದಲ್ಲಿ ನಿರ್ಜರಿತಳಾದರೂ ಪ್ರೀತಿ ಸಾಕ್ಷಾತ್ಕಾರವಾದ ಖುಷಿಗೆ ತನ್ನ ಪ್ರೀತಿ ಪಾವಿತ್ರ್ಯತೆ ಮೆರೆದ ಸಾರ್ಥಕತೆಯಲ್ಲಿ ಹಿಮ ಮನಸ್ಸು ಹಗುರಾಯ್ತು, ಮತ್ತೆ ಅವಳ ಪರೀಕ್ಷಿಸಿದ ನರ್ಸ್‌ ಎಲ್ಲಾ ಸರಿಯಿದ್ದು ಡಾಕ್ಟ್ರು ಬಂದ ತಕ್ಷಣ ಓಟಿ ಎಂದು ಅವಳ ತಯಾರುಮಾಡುವ ಪ್ರಕ್ರಿಯೆ ಶುರುಮಾಡಿದರು

ಅವಳು ಓಟಿ ಒಳಗೆ ಹೋಗುತ್ತಿರಲು ಬಾಗಿಲಲ್ಲಿ ಅತ್ತ ಕುಟುಂಬ ಇತ್ತ ತನ್ನ ಪ್ರೀತಿ, ಒಳಗೆ ಹೋದವಳು ತಾ ಹೊರಗೆ ಬರುವೆನೋ ಇಲ್ಲವಾ ಅವಳಿಗೂ ಗೊತ್ತಿರಲಿಲ್ಲ, ಕೊನೆಗೊಮ್ಮೆ ಎಲ್ಲರ ಕಣ್ತುಂಬಿಕೊಂಡು ಕೈಮುಗಿದು ಒಳಗೆ ಹೋಗಲು, ಜೇಷ್ಠ ಕೈಮುಂದೆ ಮಾಡಿ ನೀ ಗೆದ್ದು ಬರುವೆ ಏನಾಗುವುದಿಲ್ಲ ಎಂದು ಸನ್ನೆ ಮಾಡಿದ, ಅವನಿಗೊಂದು ನಗೆ ಬೀರಿ ಅವಳು ಒಳಗೆ ಹೋಗಲು ಬಾಗಿಲಲ್ಲಿ ನಿಂತ ಅವಳ ಪ್ರೀತಿಪಾತ್ರರ ಪ್ರಾರ್ಥನೆ ಭಗವಂತನ ನಿದ್ದೆಯ ಕೆಡಿಸಿತ್ತು. ಭಗವಂತನಿಗೆ ಅವರ ಮೊರೆ ಈಡೇರಿಸದೇ ಬೇರೆ ದಾರಿಯಿರಲಿಲ್ಲ, ಸರ್ಜರಿ ಯಾವುದೇ ತೊಂದರೆ ಇಲ್ಲದೆ ಸುಸೂತ್ರವಾಗಿ ಜರುಗಿತು, ಹೊರತೆಗೆದ ಗೆಡ್ಡೆಯ ಪರೀಕ್ಷೆಗೆ ಕಳುಹಿಸಿರುವೆವು ಫಲಿತಾಂಶ ಬಂದ ನಂತರ ಮುಂದಿನ ಚಿಕಿತ್ಸೆಯ ಬಗೆಗೆ ನಿರ್ಧಾರ ಮಾಡಬಹುದು ಎಂದು ವೈದ್ಯರು ತಿಳಿಸಿದರು

ಹಿಮಳ ಕುಟುಂಬ, ಜೇಷ್ಠ ಅವಳೊಂದಿಗೇ ಇದ್ದು ಅವಳ ಪಾಲನೆ ಮಾಡಿದರು, ಅವರ ಆರೈಕೆಯಲಿ ಹಿಮ ಚೇತರಿಸಿಕೊಳ್ಳುತ್ತಿದ್ದಳು, ಹಂತದಲ್ಲೂ ಹಿಮಳ ಹೆತ್ತವರು ಜೇಷ್ಠನನ್ನು ಒಪ್ಪಿರಲಿಲ್ಲ, ಆದರೆ ಸಮಯಕ್ಕೆ ಅವನ ಹೊರಕಳುಹಿಸಿದರೆ ಮಗಳಿಗೆ ತೊಂದರೆಯಾದೀತೆಂದು ಅವನ ಸಹಿಸಿಕೊಂಡರು, ಜೇಷ್ಠ ಎಲ್ಲಾ ಗೊತ್ತಿದ್ದೂ ಗೊತ್ತಿಲ್ಲದಂತೆ ನಗುನಗುತ್ತಾ ಹಿಮಳಿಗೆ ಬೆನ್ನೆಲುಬಾಗಿ ಖಾಯಿಲೆಯ ಎದುರಿಸಲು ಅವಳ ಧೈರ್ಯವಾದ.

ಅಂದು ಸಂಜೆ ರೌಂಡ್ಸ್ ಗೆ ಬಂದ ವೈದ್ಯರಿಗೆ ನರ್ಸ್‌ ರಿಪೋರ್ಟ್‌ ಕೈಗೆ ನೀಡಲು ಅಲ್ಲೊಂದು ಆತಂಕ ಮೌನ, ರಿಪೋರ್ಟ್‌ ನೋಡಿದ ವೈದ್ಯರು ಹಿಮಳಿಗೆ ಒಂದು ನಗೆ ಬೀರಿ ಹೆದರಬೇಡಮ್ಮ, ನಿನ್ನ ಮೆದುಳಲ್ಲಿದ್ದ ಗೆಡ್ಡೆಯನ್ನು ಸಂಪೂರ್ಣವಾಗಿ ತೆಗೆದಿದ್ದು ಕ್ಯಾನ್ಸರ್‌ ಮೊದಲ ಹಂತದಲ್ಲೇ ಇದ್ದು ಎಲ್ಲೂ ಹರಡಿಲ್ಲ, ಇನ್ನ್ಯಾವ ಭಯವಿಲ್ಲ, ಗಾಯ ಒಣಗಿದೆ ನಾಳೆಯೇ ಡಿಸ್ಚಾರ್ಜ್‌ ಮಾಡುವೆ, ನೀನು ಮೊದಲಿನಂತೇ ಪಾಠ ಮಾಡಿಕೊಂಡು ಆರಾಮವಾಗಿರಬಹುದೆನ್ನಲು ಎಲ್ಲರೂ ನಿಟ್ಟುಸಿರುಬಿಟ್ಟರು, ವೈದ್ಯರಿಗೆ ಕೈಮುಗಿದು ತಮ್ಮ ಪಾಲಿನ ದೇವರೆಂದು ನಮಿಸಿದರು, ಹಿಮಳ ತಾಯಿ ಅವಳ ಮೇಲೆ ಮುತ್ತಿಟ್ಟು ನನ್ನ ಮಾಣಿಕ್ಯ ನನಗೆ ಮತ್ತೆ ಸಿಕ್ಕಿತೆಂದು ಸಂಭ್ರಮಿಸಲು, ವಾರ್ಡ್‌ ನರ್ಸ್‌ ಜೇಷ್ಠನನ್ನು ಕುರಿತು ಸರ್‌ ನೀವು ಮೇಡಂ ಪಾಲಿಗೆ ಮರುಜೀವ , ನೀವು ಬಂದದ್ದು ಅವರಲ್ಲೊಂದು ನವಚೈತನ್ಯ ತಂದಿತು, ಅವರು ಧೈರ್ಯದಿ ಎಲ್ಲಾ ನಿಭಾಯಿಸಿದರು, ನೀವು ಅವರ ಪಾಲಿನ ಅದೃಷ್ಟ ಎನ್ನಲು ಮತ್ತೆ ಹಿಮಳ ಹೆತ್ತವರು ಮಂಕಾದರು, ತಾವು ಎಷ್ಟೇ ಮಮತೆ ತೋರಿದರು ಅವನೇ ಅವಳಿಗೆ ಮುಖ್ಯವಾದನಲ್ಲ ಎಂದು ನೊಂದುಕೊಂಡರು.

ಮರುದಿನ ಡಿಸ್ಚಾರ್ಜ್‌ ವೇಳೆಗೆ ಹಿಮಳ ಪಕ್ಕದಲ್ಲಿದ್ದ ಜೇಷ್ಠಳನ್ನು ಕಂಡ ಅವರ ತಂದೆತಾಯಿ ಎಲ್ಲಾ ಔಷಧ ರಿಪೋರ್ಟ್ಸ್‌ ಅವನ ಕೈಲಿಟ್ಟು ಕಣ್ಣೀರಿಡುತ್ತಾ ಹೊರನಡೆಯಲು ಮುಂದಾಗಲು ಇವರಿಬ್ಬರಿಗೂ ಅವರ ನಡೆ ಅರ್ಥವಾಗಲಿಲ್ಲ ದಂಗಾಗಿ ಮುಖ ಮುಖ ನೋಡಿಕೊಂಡರು.

ಚಿಕ್ಕಪ್ಪ ಅಣ್ಣಾ, ಬೇಡ ಕಠಿಣ ನಿರ್ಧಾರ ಬೇಡ, ನಾವು ಮಕ್ಕಳಿಗೆ ಸಂಗಾತಿ ಹುಡುಕುವಾಗ ನಮ್ಮಷ್ಟೇ ಕಾಳಜಿ ಪ್ರೀತಿ ತೋರುವವರು ನಮ್ಮ ಮಕ್ಕಳಿಗೆ ಸಿಗಲೆಂದು ಪ್ರಾರ್ಥಿಸುವೆವು , ಅದೇ ನಾವು ಅವರೇ ಅಂತಹವರನ್ನು ಹುಡುಕಿ ತಂದಾಗ ಒಪ್ಪದೇ ತಿರಸ್ಕರಿಸುವುದು ವಿಪರ್ಯಾಸ, ಜೇಷ್ಠ ಒಳ್ಳೆಯವನೆನ್ನುವುದು ನನ್ನ ಅನಿಸಿಕೆ, ನಿಲ್ಲಿ ಮಾತಾಡಿ ಅವರಿಬ್ಬರಿಗೆ ಒಂದು ಜೀವನ ಕೊಡಿ ಎನ್ನಲು ಹಿಮಳ ತಂದೆ ಕೈಯೆತ್ತಿ ಅವರ ಪಾಡು ಅವರದ್ದು ಎನ್ನುತ್ತಾ ಹೆಂಡತಿ ಹೆಗಲ ಮೇಲೆ ಅವರ ಕೈಯಿಟ್ಟು ಮತ್ತೆ ತಿರುಗಿ ನೋಡದೇ ಆಸ್ಪತ್ರೆಯಿಂದ ಸುಮ್ಮನೆ ಹೊರನಡೆದುಬಿಟ್ಟರು.

ಹಿಮ ಅಮ್ಮಾ, ಅಪ್ಪಾ ಎಂದು ಅರುಚಲು ಅವರು ತಿರುಗಿ ನೋಡಲಿಲ್ಲ, ಅವರ ಹೆಜ್ಜೆ ನಿಲ್ಲಲ್ಲಿಲ್ಲ, ಹಿಮ ಅಳುತ್ತಾ ಅಳುತ್ತಾ ಜೇಷ್ಠನನ್ನು ನೋಡಲು ಜೇಷ್ಠ ಅವಳನ್ನು ಕುರಿತು ಅವರು ಕೊಟ್ಟ ರಿಪೋರ್ಟ್ಸ್‌ ಔಷಧ ಕವರ್‌ ತೋರಿಸಿ ಅಳಬೇಡ, ನಿನ್ನನ್ನು ಪರಿಸ್ಥಿತಿಯಲ್ಲಿ ಇಲ್ಲಿ ಬಿಟ್ಟು ಹೋಗಿದ್ದಾರೆಂದರೆ ಅವರಿಗೆ ನಾನು ನಿನ್ನ ಜೋಪಾನ ಮಾಡಬಲ್ಲೆ ಎಂಬ ನಂಬಿಕೆ ಬಂದಿದೆ, ನಮ್ಮ ಪ್ರೀತಿಯ ಸತ್ಯದ ದರ್ಶನವಾಗಿದೆ, ನಿನ್ನ ಭಾರ ನನಗೆ ವಹಿಸಿ ಅವರ ಮನೆಯ ಹೂ ನನಗೆ ಒಪ್ಪಿಸಿ ಹೋಗಿದ್ದಾರೆ, ಅದು ಬಾಡದಂತೆ ಕಾಪಾಡುವ ಹೊಣೆ ನನ್ನದು , ಹೆದರಬೇಡ, ಅಷ್ಟು ಪ್ರೀತಿ ಮಾಡಿದರೂ ನಿನಗೆ ನಾ ಮುಖ್ಯವಾದೆ ಎಂಬ ಬೇಸರವೋ? ನಮ್ಮ ಪ್ರೀತಿಯ ಅನುಮಾನಿಸಿದಕ್ಕೆ ಮುಜುಗರವೋ? ಇಲ್ಲ ಸಮಾಜದ ಪ್ರಶ್ನೆಗಳ ಭಯವೋ?? ಹೋಗುತ್ತಿದ್ದಾರೆ, ನೀನವರ ಪ್ರಪಂಚ ನಿನ್ನ ಬಿಟ್ಟು ಬದುಕುವ ಶಕ್ತಿ ಅವರಿಗಿಲ್ಲ, ನಿನ್ನ ಹುಡುಕಿ ಬಂದೇ ಬರುತ್ತಾರೆ, ಅಲ್ಲಿಯವರೆಗೆ ಕಾಯುತ್ತಾ ಅವರ ನಂಬಿಕೆ ಹುಸಿಮಾಡದೆ ಮಾದರಿಯಾಗಿ ಬದುಕೋಣ, ನಮ್ಮ ಬದುಕು ಅವರನ್ನು ನಮ್ಮ ಬಳಿ ಕರೆತಂದೇ ತರುವುದೆಂದು ಅವಳ ಕೈ ಮೇಲೆ ಕೈಯಿಟ್ಟು ನಾ ನಿನ್ನ ಅವರಂತೆ ಕಣ್ರೆಪ್ಪೆಯಂತೆ ಕಾಯುವೆ ಎಂದು ವಚನವಿತ್ತ.ಅವರ ಚಿಕ್ಕಪ್ಪ ಇಬ್ಬರನ್ನೂ ಕಾರಿನಲ್ಲಿ ಜೇಷ್ಠನ ಮನೆಗೆ ಕರೆದುಕೊಂಡು ನಡೆದರು.

ಜೋಡಿಹಕ್ಕಿಗಳು ಗೂಡಿಗೆ ಮರಳಲು, ಮರಿಗುಬ್ಬಿಗಳ ಪ್ರೀತಿಗೆ ದಾರಿಮಾಡಿಕೊಟ್ಟು ತಂದೆತಾಯಿ ತಿರುಗಿನೋಡದೆ ಹೊರಟಿದ್ದರು. ಒಂದು ಪ್ರೀತಿಯ ಒಂದಾಗಿಸಲು ಮತ್ತೊಂದು ಪ್ರೀತಿ ತ್ಯಾಗದಿ ಹೊರನಡೆಯಲು ನಮ್ಮ ಪ್ರೇಮಶಕ್ತಿ ಅವರ ಮರಳಿ ಕರೆತರುವುದೆನ್ನುವ ನಿರೀಕ್ಷಣೆಯಲ್ಲಿ ಪ್ರೇಮಗಾನದ ಪಲ್ಲವಿ ಹಾಡಲಾರಂಭಿಸಿತು, ಹಾಡಿನಂತ್ಯದೊಳಗೆ ಭಾವಗೀತೆಗೆ ದನಿಯಾಗಿ ತಮ್ಮವರು ತಮ್ಮನ್ನು ಕೂಡಿಕೊಳ್ಳುವರು ಎಂಬ ನಂಬಿಕೆಯಲಿ, ಅದೇ ಪ್ರಾರ್ಥನೆಯಲಿ.


                           ಡಾ.ಶಾಲಿನಿ.ವಿ.ಎಲ್‌

Comments