ಓದೋ ವಯಸ್ಸಲ್ಲಿ ಓದಿ, ಪ್ರೀತಿ ಮಾಡೋ ವಯಸ್ಸಲ್ಲಿ ಪ್ರೀತಿ ಮಾಡಿ, ಮದುವೆ ಆಗೋ ವಯಸ್ಸು ಬಂದಾಗ ಮದುವೆ ಆಗಬಹುದು ..ಮಕ್ಕಳು ಒಂದು ವಯಸ್ಸಿಗೆ ಬಂದಾಗ ಮನೆಯಲ್ಲಿ ಪದೇಪದೇ ತಂದೆ ತಾಯಿ ಹೇಳುವ ಮಾತು. ಕೆಲವೊಮ್ಮೆ ಮಾತು ಮಕ್ಕಳಿಗೆ ಕಿರಿಕಿರಿಯಾಗುವುದೂ ಉಂಟು. ಆದರೆ ಮಾತು ಸಮಾಜದ ಘಟನೆಗಳ ಅನುಭವದ ಕಿವಿಮಾತು ಎಂಬುದ ಮರೆತು ಬಿಡುತ್ತೇವೆ.

        ಕಾಲೇಜಿನಲ್ಲಿ ಓದುವ ಹೆಣ್ಣು ಮಕ್ಕಳ ಹಿಂದೆ ಹಿಂದೆ ಅಲೆದು, ಕಾಡಿಸಿ, ಅವರ ತಲೆ ಕೆಡಿಸಿ, ಪ್ರೀತಿ ಪ್ರೇಮದ ಬಲೆ ಬೀಸಿ , ಅವರನ್ನು ಒಪ್ಪಿಸಿ, ಒಪ್ಪದಿದ್ದರೆ ಅವರನ್ನು ಕದ್ದು ಹೊಯ್ದು ಮದುವೆಯಾಗುತ್ತಾರೆ. ಕೆಲವೊಮ್ಮೆ ಇವರ ಹುಚ್ಚಾಟವ ತಡೆಯದೆ ಪೋಷಕರೇ ಮುಂದೆ ನಿಂತು ಮದುವೆ ಮಾಡಿಬಿಡುತ್ತಾರೆ.
ಈಗ ಕಾಲೇಜಿನವರೇನು ಆಟಗಳು ಹೈಸ್ಕೂಲ್‌ ಹಂತದಲ್ಲೇ ಶುರು, ಈಗ ಎಲ್ಲಾ ಪೋಷಕರಿಗೂ ಮಕ್ಕಳಿಗೆ ಒಳ್ಳೆ ವಿದ್ಯಾಭ್ಯಾಸ ಮಾಡಿಸುವಾಸೆ, ಆದರೂ ಕಾರಣ ಪ್ರಸ್ತುತ ದಿನಗಳಲ್ಲಿ ನಡೆಯುವ ಬಾಲ್ಯವಿವಾಹಕ್ಕೆ ಪ್ರಮುಖ ಕಾರಣವೆಂದರೆ ಅತಿಶಯವಾಗದು.

         ಸರಿ ಹೀಗೆ ಮದುವೆಯಾದ ಒಂದೆರಡು ವರ್ಷ ಅವಳ ಪಾಲಿಗೆ ಸ್ವರ್ಗ.. ಮಾತಲ್ಲೇ ಮಂಟಪ ಕಟ್ಟಿ ಅಂಗೈಲಿ ಆಕಾಶ ತೋರಿಸಿ ಎಲ್ಲರಿಗಿಂತ ಅವನೇ ಮುಖ್ಯ ಎಂಬ ಭಾವನೆಗೆ ಅವಳನ್ನು ತಂದು ನಿಲ್ಲಿಸಿ ಅವಳು ಎಲ್ಲರನ್ನು ಧಿಕ್ಕರಿಸಿ ಅವನ ಹಿಂದೆ ಓಡಿ ಹೋದ ಅವಳ ನಿರ್ಧಾರ ಸರಿಯೆನಿಸುವ ಸಮಯ.. 

      ಮದುವೆಯಾದ ಒಂದೆರಡು ವರ್ಷದ ಬಳಿಕ ನಡೆಯುವ ಭಯಾನಕ ಕಥೆಗಳು ನಮ್ಮನ್ನು ಬೆಚ್ಚಿಬೀಳಿಸುತ್ತವೆ. ಘಟನೆಗಳು ಗ್ರಾಮೀಣ ಭಾಗದಲ್ಲಿ ಬಹಳವೇನೋ?? 
ಹಳ್ಳಿ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆಯಾಗಿರುವ ನನ್ನ ಬಳಿ ಬರುವ ಅನೇಕ ಹೆಣ್ಮಕ್ಕಳ ಕಥೆ ನನ್ನನ್ನು ಲೇಖನಕ್ಕೆ ಪ್ರೇರೇಪಿಸಿದೆ.

     ನಮ್ಮ ಘನತೆ ಪ್ರೀತಿ ಮರೆತು ಅವನ ಹಿಂದೆ ನಡೆದ ಮಗಳು ಪೋಷಕರ ಪಾಲಿಗೆ ಲೆಕ್ಕಕ್ಕಿಲ್ಲವಾಗುವಳು, ಅತ್ತೆ ಮನೆಯವರೂ ಅವರು ತರುವ ಸೊಸೆಯನ್ನೇ ಸರಿಯಾಗಿ ನಡೆಸಿಕೊಳ್ಳುವುದಿಲ್ಲ, ಇನ್ನ ಓಡಿ ಬಂದವಳಿಗೆ ನೀಡುವ ಮಹತ್ವ ನಾನೇನು ಹೇಳಬೇಕಿಲ್ಲ.. ಅವಳಿಗೆ ಆಸರೆ ಅಂದರೆ ತಾ ನೆಚ್ಚಿಕೊಂಡ ಹೋದ ನಲ್ಲ.. ಅವನು ಅವಳನ್ನು ಅರ್ಥೈಸಿಕೊಂಡು ನಡೆದರೆ ಅದು ಅವಳ ಅದೃಷ್ಟ..ಆದರೆ ದುರಾದೃಷ್ಟವಾತ್‌‌ ನಾ ಕಂಡಂತೆ ಅಲ್ಲಿ ನಡೆಯುವುದೇ ಬೇರೆ. ಅವನ ಪ್ರೀತಿ ಅಮಲು ಇಳಿದ ಮೇಲೆ ಅವನ ನಿಜವಾದ ಮುಖವಾಡ ಬಯಲಾಗುವುದು

     ರನ್ನ ಚಿನ್ನ ಎಂದು ಮುದ್ದಿಸಿದಾಕೆ ಹೀಗೆ ಓಡಿಸಿಕೊಂಡು ಹೋಗುವ ಹುಡುಗರಿಗೆ ಬಲು ಬೇಗ ಬೋರಾಗುವಳೋ ಏನೋ?? ಮದುವೆಯಾದ ಕೆಲವು ವರ್ಷಕ್ಕೆ ಅವಳ ಮೇಲೆ ಅವನ ದರ್ಪ ಶುರು. ಬಹುಶಃ ನಾ ಕರೆದಾಕ್ಷಣ ನನ್ನಿಂದೆ ಓಡಿ ಬಂದಾಕೆ ಬೇರೆಯವರು ಕರೆದರೆ ಹೋಗುವುದಿಲ್ಲ ಎಂಬ ಅನುಮಾನ ಬಹು ಬೇಗ ಅವರ ತಲೆಹೊಕ್ಕುವುದೇನೋ??  ಬಹಳ ಬೇಗ ಅವಳ ನಡೆತೆಗೆ ಕಪ್ಪು ಪಟ್ಟಿ ಹಚ್ಚಲು ಮುಂದಾಗೋ ಅವನನ್ನು ಏನನ್ನಬೇಕೋ ತಿಳಿಯದು. ಹುಟ್ಟುವ ಮಗುವೂ ನನ್ನದಲ್ಲ ಎನ್ನುವಷ್ಟರ ಮಟ್ಟಿಗೆ ಅವನ ಮನಸ್ಥಿತಿ ಬದಲಾದಾಗ ಅವಳಿಗಾಗುವ ಆಘಾತ ನೆನೆಯಲೂ ಅಸಾಧ್ಯ.. ಯಾವುದೇ ಹೆಣ್ಣಿನ ಪಾಲಿಗೂ ಅದಕ್ಕಿಂತ ಮತ್ತೊಂದು ದುರಂತವಿಲ್ಲ.

            ಆದರೆ ನಾ ಕಂಡಂತೆ ಓಡಿ ಹೋದ ಹೆಣ್ಮಕ್ಕಳಿಗೆ ಇದೊಂದು ಹಣೆಪಟ್ಟಿ ಬೇಗ ಲಭ್ಯವಾಗುವುದು. ನಂತರದ ದಿನದಲ್ಲಿ ಕಟ್ಟಿಕೊಂಡ ಮಹಾಶಯ ಅವಳನ್ನು ನಡೆಸಿಕೊಳ್ಳುವ ರೀತಿ ಹೆಣ್ಮಕ್ಕಳು ವಿವರಿಸುವಾಗ ಮನಕಲುಕುತ್ತದೆ. ಪುಣ್ಯಾತ್ಮ ಕುಡುಕನಾಗಿಬಿಟ್ಟರಂತೂ ಈಕೆಯೇ ದುಡಿದು ಮನೆ ಜವಬ್ದಾರಿ ಹೊರಬೇಕು, ಬಳುವಳಿಯಾಗಿ ಅವನ ಹೊಲಸು ಮಾತು, ಏಟುಗಳು ಅವನಿಂದ ಸಿಗುವುದು.. ಅವಳ ಕಷ್ಟ ಯಾರು ಕೇಳುವರು, ಯಾರಿಗೆ ಹೇಳಿದರೂ ನೀನೇ ಮಾಡಿಕೊಂಡದ್ದು ಅನುಭವಿಸು ಎನ್ನುವ ಉಢಾಫೆ ಉತ್ತರ..

       ಮಾಡಿದೊಂದು ತಪ್ಪಿಗೆ ಅನುಕ್ಷಣ ಶಿಕ್ಷೆ ಆಕೆಗೆ,
 ಯಾರ ಆಸರೆಯಿಲ್ಲದೆ ಅನುಮಾನ ಅವಮಾನದ ನೆರಳಲ್ಲೇ ಬದುಕು ಸಾಗಿಸುವ ಅನಿವಾರ್ಯತೆ ಅವಳಿಗೆ.. ಎಷ್ಟೋ ಬಾರಿ ಹೆಣ್ಮಕ್ಕಳು ನೋವಲ್ಲಿ ನೊಂದು ಬೆಂದು ಜಡವಾಗುವರು, ಕೆಲವರು ಮಕ್ಕಳ ಮುಖ ನೋಡಿ ಅವರ ನಗುವಿಗಾಗಿ ಬದುಕುವರು, ಇನ್ನೂ ಕೆಲವರು ಮಾನಸಿಕ ಅಸ್ವಸ್ಥರಾದರೆ ಕೆಲವರು ಸಾವಿಗೆ ಶರಣಾಗುವರು, ಇನ್ನೂ ಕೆಲವರು ಬದುಕು ಸಾಗಿಸಲು ಅಡ್ಡ ದಾರಿ ಹಿಡಿಯುವರು.

       ಇಷ್ಟಕ್ಕೆಲ್ಲಾ ಕಾರಣ ವಯಸ್ಸಲ್ಲಿ ಮಾಡಿದ ಒಂದು ತಪ್ಪು, ಬಣ್ಣದ ಮಾತಿಗೆ ಬೆರಗಾಗಿ ಅವನ ಹಿಂದೆ ನಡೆದದ್ದುಓದುತ್ತಿದ್ದೆ , ಇವನ ನೆಚ್ಚಿಕೊಂಡು ಬಂದು ನರಕ ನೋಡಿದೆ ಎಂದು ಅವರು ಗೋಳಾಡುವಾಗ ಪಶ್ಚಾತ್ತಾಪ ಕಣ್ಣೀರಾಗಿ ಮಾತನಾಡುವ ಪರಿ ಬೇಸರ ತರುವುದು. ಪೋಷಕರೂ ಆದದ್ದು ಆಯ್ತೆಂದು ಕ್ಷಮಿಸಿ ಮಗಳ ಜೊತೆಗೆ ಹೆಗಲಾಗಿ ನಿಲ್ಲಲು ಮನಸ್ಸು ಮಾಡುವುದಿಲ್ಲ, ಪ್ರತಿಷ್ಠೆ ಮುಂದೆ ಮಗಳೆಂಬ ಮಮಕಾರ ಮರೆತು ಹೋಗುವುದು. ಅವಳ ಬಾಳೇ ಗೋಳಾಗುವುದು.

         ಅದಕ್ಕೇ ಹೆಣ್ಮಕ್ಕಳಿಗೆ ನನ್ನದೊಂದು ಕಿವಿಮಾತು, ವಯಸ್ಸಲ್ಲಿ ತಂದೆ ತಾಯಿ ಧಿಕ್ಕರಿಸಿ ಯಾರದೋ ಪಾಶದಲಿ ಸೆರೆಯಾಗದಿರಿ, ಓದುವ ಸಮಯದಲಿ ಯಾರಾದರೂ ನಿಮ್ಮ ಹಿಂದೆ ಬಿದ್ದರೆ ಮೊದಲು ಸಂಕೋಚ ಮಾಡಿಕೊಳ್ಳದೆ ನಿಮ್ಮ ಪೋಷಕರಿಗೆ ತಿಳಿಸಿಬಿಡಿ, ಅವರು ನೀವು ಮೋಸದಾಟದಿ ಬಲಿಯಾಗದಂತೆ ನಿಮ್ಮನ್ನು ರಕ್ಷಿಸುವರು, ಅದು ಬಿಟ್ಟು ವ್ಯಾಮೋಹಕ್ಕೆ ಸಿಕ್ಕರೆ ಮುಂದೆ ನಿಮ್ಮ ಬದುಕೇಗಬಹುದೆಂಬ ಚಿತ್ರಣ ನಾ ಕಂಡಂತೆ ನಿಮ್ಮ ಮುಂದಿಟ್ಟಿರುವೆ, ಬದುಕಿನ ಎಚ್ಚರಿಕೆ ಘಂಟೆಗೆ ಕಿವಿಕೊಡದೆ ನಡೆದರೆ ಬದುಕು ಆಸರೆಯಿಲ್ಲದ ಗೊಂದಲದ ಗೂಡಾಗಿ ಬೇಕಾಬಿಟ್ಟಿಯಾಗುವುದು, ಹತ್ತು ಬಾರಿ ಯೋಚಿಸಿ ನಿರ್ಧಾರಕ್ಕೆ ಬಂದರೆ ನಿಮಗೇ ಒಳ್ಳೆಯದು ಎಂಬುದು ನಾ ಕಂಡ ಘಟನೆಗಳ ಅನುಭವದ ಮಾತು.


               ಡಾ. ಶಾಲಿನಿ. ವಿ. ಎಲ್‌

Comments

Popular posts from this blog